ವೈಸ್‍ಮನ್, ಚೈಮ್
	1874-1952. ಇಸ್ರೇಲಿನ ವಿಜ್ಞಾನಿ ಹಾಗೂ ಇಸ್ರೇಲಿನ ಪ್ರಥಮ ಅಧ್ಯಕ್ಷ. ಇವನು ರಷ್ಯದ ಮೋಟಲ್ ಎಂಬ ಸ್ಥಳದಲ್ಲಿ 1874 ನವೆಂಬರ್ 27ರಂದು ಜನಿಸಿದ. ಫ್ರೀಬರ್ಗ್ ಮತ್ತು ಬರ್ಲಿನ್ನಿನಲ್ಲಿ ಉನ್ನತ ವ್ಯಾಸಂಗ ಪಡೆದು ಜಿನೀವದಲ್ಲಿ ರಸಾಯನ ವಿಜ್ಞಾನದ ಅಧ್ಯಾಪಕನಾದ. ಅನಂತರ ಇಂಗ್ಲೆಂಡಿನ ಮ್ಯಾಂಚೆಸ್ಟರ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕನಾಗಿ ಕೆಲಸಕ್ಕೆ ಸೇರಿದ(1904). ಕೆಲವು ವರ್ಷಗಳ ಅನಂತರ ಬ್ರಿಟಿಷ್ ಪ್ರಜೆಯಾಗಿರಲು ಅನುಮತಿ ಪಡೆದ. ಬ್ರಿಟಿಷ್ ಪ್ರಯೋಗಶಾಲೆಗಳ ಡೈರೆಕ್ಟರ್ ಪದವಿಗೇರಿದ. 1914ರಲ್ಲಿ ಒಂದನೆಯ ಮಹಾಯುದ್ಧದ ಸಮಯದಲ್ಲಿ ಇವನು ಮಾಡಿದ ಸಂಶೋಧನೆಯೊಂದು ಇವನಿಗೆ ಕೀರ್ತಿಯನ್ನು ಹೆಚ್ಚಿಸಿತು. ಸಿಡಿಮದ್ದಿನ ಬಳಕೆಗೆ ಸಂಯೋಜಕ ಅಸಿಟೋನನ್ನು ಕಂಡು ಹಿಡಿದುದರಿಂದ ಮಿತ್ರರಾಷ್ಟ್ರಗಳಿಗೆ ಯುದ್ಧದಲ್ಲಿ ಬಹಳ ಅನುಕೂಲವಾಯಿತು. ಇವನು ಜಿಯೋನಿಸ್ಟ್ ಚಳವಳಿಯ ನಾಯಕನಾಗಿದ್ದು ಅದರ ತತ್ತ್ವಗಳನ್ನು ಪ್ರಚಾರ ಮಾಡುತ್ತ ಬಂದ. ಯಹೂದ್ಯರು ತಮ್ಮ ತಾಯ್ನಾಡಾದ ಪ್ಯಾಲಸ್ತೀನಿನಲ್ಲಿ ಸ್ವತಂತ್ರ ರಾಷ್ಟ್ರವನ್ನು ಸ್ಥಾಪಿಸುವುದೇ ಆ ಚಳವಳಿಯ ಮುಖ್ಯ ಉದ್ದೇಶವಾಗಿತ್ತು. ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿ ಚದುರಿ ಚೆಲ್ಲಾಪಿಲ್ಲಿಯಾಗಿದ್ದ ಯಹೂದ್ಯರು ಒಟ್ಟುಗೂಡಿ ತಮ್ಮದೇ ಆದ ರಾಷ್ಟ್ರವನ್ನು ಸ್ಥಾಪಿಸಲು ಯತ್ನಿಸುತ್ತಿದ್ದರು. ಇದು ಫಲಪ್ರದವಾಗಬೇಕಾದರೆ ಇಂಗ್ಲೆಂಡಿನಂಥ ಪ್ರಮುಖ ರಾಷ್ಟ್ರಗಳ ಸಹಾಯ ಅತ್ಯವಶ್ಯಕವಾಗಿತ್ತು. ಇವನು ಇಂಗ್ಲೆಂಡಿನ ಜನರಲ್ಲಿ ಈ ಚಳವಳಿಯಲ್ಲಿ ಆಸಕ್ತಿಯ ನ್ನುಂಟು ಮಾಡಿ ಅವರ ಬೆಂಬಲ ಪಡೆಯುವುದರಲ್ಲಿ ಯಶಸ್ವಿಯಾದ. ಇದರ ಪರಿಣಾಮವಾಗಿ 1917ರಲ್ಲಿ ನಡೆದ ಬ್ಯಾಲ್‍ಪೋರ್ ಸಮ್ಮೇಳನದಲ್ಲಿ ಯಹೂದ್ಯ ರಿಗೆ ಪ್ಯಾಲಸ್ತೀನಿನಲ್ಲಿ ಒಂದು ರಾಷ್ಟ್ರವನ್ನು ನಿರ್ಮಿಸುವ ಯೋಜನೆ ಅಂಗೀಕೃತವಾಯಿತು. ಇದಕ್ಕೆ ಇವನ ಪ್ರಯತ್ನ ಬಹುಮಟ್ಟಿಗೆ ಕಾರಣವಾಗಿತ್ತು. ಇವನು ಪ್ರಪಂಚ ಜಿಯೋನಿಸ್ಟ್ ಸಂಘಕ್ಕೆ ಅಧ್ಯಕ್ಷನಾಗಿದ್ದ(1921-29). ಇಂಥ ಅನೇಕ ಸಂಘ ಸಂಸ್ಥೆಗಳಲ್ಲಿ ಮುಖ್ಯ ಪಾತ್ರವನ್ನು ವಹಿಸಿದ್ದು ಇಸ್ರೇಲ್ ರಾಷ್ಟ್ರ ನಿರ್ಮಾಣಕ್ಕೆ ಶ್ರಮಿಸಿದ. 1948ರಲ್ಲಿ ಇಸ್ರೇಲ್ ರಾಷ್ಟ್ರ ಅಸ್ತಿತ್ವಕ್ಕೆ ಬಂದಾಗ ಅದರ ತಾತ್ಕಾಲಿಕ ಅಧ್ಯಕ್ಷನಾಗಿದ್ದು ಅನಂತರ 1949ರಲ್ಲಿ ಇಸ್ರೇಲಿನ ಮೊತ್ತಮೊದಲನೆಯ ಅಧ್ಯಕ್ಷನಾಗಿ ಆಯ್ಕೆಯಾದ. ಇವನು 1952 ನವೆಂಬರ್ 9ರಂದು ನಿಧನಹೊಂದಿದ.
										(ಎಮ್.ವಿ.ಎಸ್.ಆರ್.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ